ಗ್ರ್ಯಾಂಡ್ ಕನೇರಿ-
ಸ್ಪೇನಿಗೆ ಸೇರಿದ ಲಾಸ್ ಪಾಲ್ಮಾಸ್ ಪ್ರಾಂತ್ಯದ ಕನೇರಿ ದ್ವೀಪಸ್ತೋಮದ ಒಂದು ದ್ವೀಪ. ವಿಸ್ತೀರ್ಣ 592 ಚ. ಮೈ. ಅಡ್ಡಳತೆ 28 ಮೈ. ಇದಕ್ಕೆ 120 ಮೈ. ಗಳಷ್ಟು ಕಡಲ ಅಂಚು ಇದೆ. ಜನಸಂಖ್ಯೆ 4,00,837 (1960).
ಲಾಸ್ ಪೆಕೋಸ್ (6,398)ಇಲ್ಲಿಯ ಅತ್ಯುನ್ನತ ಶೀಖರ. ಗ್ರ್ಯಾಂಡ್ ಕನೇರಿ ದ್ವೀಪದ ಬೆಟ್ಟದ ತಪ್ಪಲುಗಳಲ್ಲಿ ಆಳವಾದ ಕಮರಿಗಳಿವೆ. ಉತ್ತರದ ಇಳಕಲು ಭೂಮಿಯಲ್ಲಿ ಆಪ್ಪ್ಸ್ ಪವ್ತಗಳ ವಾಯುಗುಣವೂ ಸಸ್ಯಗಳೂ ಇವೆ. ದ್ವೀಪದ ದಕ್ಷಿಣ ಭಾಗ ಬೆಂಗಾಡು.

ಇಲ್ಲಿಯ ಜನರ ಮುಖ್ಯ ಕಸಬು ವ್ಯವಸಾಯ. ಬಾಳೆ, ಟೊಮ್ಯಾಟೊ, ಹೊಗೆಸೊಪ್ಪು ಮುಖ್ಯ ಬೆಳೆಗಳು. ಇಲ್ಲಿ ಕಸೂತಿ, ಬುಟ್ಟಿ ಮತ್ತು ಮಡಕೆ ತಯಾರಾಗುತ್ತವೆ. ಹಲವಾರು ಖನಿಜಯುಕ್ತ ಜಲಬುಗ್ಗೆಗಳು ಇಲ್ಲುಂಟು. ಈ ದ್ವೀಪದ ಮುಖ್ಯ ಪಟ್ಟಣವಾದ ಲಾಸ್ ಪಾಲ್ಮಾಸ್ (1,93,862) ಒಂದು ಬಂದರು.
(ಪಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ